ಪೆನಿಪ್ಲೇನ್ -
ನದಿ, ಗಾಳಿ ಮೊದಲಾದ ನಿಸರ್ಗಬಲಗಳ ಹತಿಯಿಂದ ಸವಕಳಿಗೆ ಒಳಗಾಗಿ ಮಟ್ಟಸವಾದ ಮೈದಾನ ಪ್ರದೇಶ.  ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಕೃತಿಕ ಭೂವಿಜ್ಞಾನದ ಪ್ರಾಧ್ಯಾಪಕ ಮತ್ತು ಭೂಮುಖ ಶಾಸ್ತ್ರದಲ್ಲಿ ಪಾರಂಗತ ಆಗಿದ್ದ ಡಬ್ಲ್ಯೂ. ಎಮ್. ಡೇವಿಸ್ (1850-1934) ಪೆನಿಪ್ಲೇನಿನ ಕಲ್ಪನೆಯನ್ನು ಪ್ರಥಮ ಬಾರಿಗೆ ಪ್ರತಿಪಾದಿಸಿದ.  ಭೂಮುಖ ಶಾಸ್ತ್ರದ ಆವರ್ತವನ್ನು (ಜಿಯೊಮಾರ್ಫಾಲಾಜಿಕಲ್ ಸೈಕಲ್) ಕುರಿತು ಆತ ಬರೆದ (1895) ಪ್ರಬಂಧದಲ್ಲಿ ಪೆನಿಪ್ಲೇನ್ ಪದದ ಬಗ್ಗೆ ಸ್ಪಷ್ಟ ವಿವರಣೆ ಇದೆ.  ಇದರ ಪ್ರಕಾರ, ಪೆನಿಪ್ಲೇನ್ ಎಂಬುದು ಆಕಾರವಿಲ್ಲದ ಸಮತಲ ಭೂಮಿ ಅಥವಾ ಮೈದಾನ.  ಇದರ ವಿನ್ಯಾಸ ಅಷ್ಟು ಮುಖ್ಯವಲ್ಲ.  ಯಾವುದೇ ನೆಲ ತಳಮಟ್ಟವನ್ನು ಸಮೀಪಿಸಿದಾಗ ಮಾತ್ರ ಇದು ಮೈದಳೆಯುತ್ತದೆ.  ಉದಾಹರಣೆಗೆ ನದಿಗಳ ನೆಲಸವೆತದ ಕೊನೆಯ ಹಂತದಲ್ಲಿ ಮಾತ್ರ ಪೆನಿಪ್ಲೇನ್ ರಚನೆಯಾಗುವುದು.  ಭೂಮಿಯ ಮೇಲಿನ ಉನ್ನತ ಭಾಗಗಳು ನದಿಗಳು ಹಾಗೂ ಇನ್ನಿತರ ಭೂವ್ಯಾಪಾರಕರ್ತೃಗಳು ನಡೆಸುವ ನಗ್ನೀಕರಣ ಕ್ರಿಯೆಯಿಂದ ಸವೆಯಲ್ಪಟ್ಟು ಕನಿಷ್ಠ ಪ್ರಮಾಣದ ಉಬ್ಬುತಗ್ಗುಗಳನ್ನು ಒಳಗೊಂಡ ಸಮತಲ ಪ್ರದೇಶವಾಗಿದ್ದರೆ ಅದಕ್ಕೆ ಪೆನಿಪ್ಲೇನ್ ಎಂದು ಹೆಸರು.

ಹರಿಯುವ ನದಿಗಳ ತ್ರಾಣ ಕುಂದಿದಂತೆಲ್ಲ ಯೌವನಾವಸ್ಥೆಯಲ್ಲಿರುವ ಭೂಭಾಗದ ಸವೆತ ಸಹ ಮಂದಗತಿಯಲ್ಲಿ ಸಾಗುತ್ತದೆ.  ಆದ್ದರಿಂದ ಪೆನಿಪ್ಲೇನಿನ ನಿರ್ಮಾಣ ಆಗಬೇಕಾದರೆ ಭೂಕಾಲಮಾನದಲ್ಲಿ ಹಲವು ಲಕ್ಷ ವರ್ಷಗಳೇ ಬೇಕಾಗಬಹುದು.  ಕ್ರಮೇಣ ರೂಪುಗೊಂಡ ಪೆನಿಪ್ಲೇನಿನ ಮೇಲ್ಭಾಗದಲ್ಲಿ ಸ್ವಲ್ಪ ಎತ್ತರವೂ ಕಡಿದೂ ಆದ ಶೇಷಬೆಟ್ಟಗಳು ಅಥವಾ ಮೋನಾಡ್‍ನಾಕ್ಸ್ ಕಾಣಿಸಿಕೊಳ್ಳುತ್ತವೆ.  ಇವು ಗಡಸುಶಿಲಗಳಿಂದ ರಚಿತವಾದವು.  ಇವುಗಳಿಗೆ ಸವೆತವನ್ನು ನಿರೋಧಿಸುವ ಸಾಮಥ್ರ್ಯ ಉಂಟು.  
ಪ್ರಸ್ತುತ ಅನೇಕ ಪೆನಿಪ್ಲೇನುಗಳು ತಮ್ಮ ಮೂಲಸ್ಥಿತಿಯಿಂದ ಬದಲಾಗಿರುವುದು ಕಂಡುಬರುತ್ತದೆ.  ಆ ಪೈಕಿ ಹೆಚ್ಚಿನವು ಸಮುದ್ರದಲ್ಲಿ ಮುಳುಗಡೆ ಆಗಿದ್ದು ಅವುಗಳ ಮೇಲೆ ಬಲು ದಪ್ಪನಾದ ಮಡ್ಡಿಸ್ತರಗಳು ಸಂಗ್ರಹವಾಗಿರುತ್ತವೆ.  ಕಾಲಕ್ರಮೇಣ ಈ ಸ್ತರಗಳ ಮೇಲಿನ ಹೊದಿಕೆ ನಗ್ನೀಕರಣದಿಂದ ಸವೆದು ಹೋಗಿ, ಅದರ ಕೆಳಗೆ ಹುದುಗಿರುವ ಪೆನಿಪ್ಲೇನಿನ ಕೆಲವು ಭಾಗಗಳನ್ನು ಮಾತ್ರ ಕಾಣಬಹುದು.  ಮತ್ತೆ ಕೆಲವು ಪೆನಿಪ್ಲೇನುಗಳು ತಳದ ಉತ್ಕರ್ಷದಿಂದ ಮೇಲಕ್ಕೆತ್ತಲ್ಪಡುತ್ತವೆ.  ಕ್ರಮೇಣ ಈ ಪೀಠಭೂಮಿಯ ಮೇಲೆ ಹರಿಯುವ ನದಿಗಳು ಆಳವಾದ ಕಣಿವೆ ಮತ್ತು ಕಮರಿಗಳನ್ನು ಕೊರೆಯುತ್ತವೆ ಮತ್ತು ಅದರ ನಯವಾದ ಮೂಲವಿನ್ಯಾಸವನ್ನೂ ಬದಲಾಯಿಸುತ್ತವೆ.  ಹೀಗೆ, ವಿಚ್ಛೇದಿಸಿದ ಪೀಠಭೂಮಿಯ (ಪೆನಿಪ್ಲೇನಿನ) ಕೆಲವು ಭಾಗಗಳು ಉಳಿಯುತ್ತವೆ.  ಆದ್ದರಿಂದ, ಯಾವೊಂದು ಪೆನಿಪ್ಲೇನೂ ಅದರ ಮೂಲ ವಿನ್ಯಾಸದಲ್ಲಿ ಬದಲಾಗದೆ ಉಳಿಯಲಾರದು.  ಭೂಕಾಲಮಾನದಲ್ಲಿ  ಹಲವಾರು ಲಕ್ಷ ವರ್ಷಗಳಿಂದಲೂ ಭೂ ತೊಗಟೆಯಲ್ಲಿ ಇರುವ ಅಸ್ಥಿರತೆ ಇದರಿಂದ ವೇದ್ಯವಾಗುತ್ತದೆ.
(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ